ಕೋಕಿಯ  

ಚಿನೋಪೋಡಿಯೇಸೀ ಕುಟುಂಬಕ್ಕೆ ಸೇರಿದ ಒಂದು ಜಾತಿಯ ಅಲಂಕಾರ ಸಸ್ಯ. ವಯಸ್ಸಾದ ಅನಂತರ ಇದರ ಎಲೆಗಳು ಬೆಂಕಿಯ ಬಣ್ಣಕ್ಕೆ ತಿರುಗುವುದರಿಂದ ಇದನ್ನು ಫೈರ್‍ಬುಷ್ ಎಂದೂ ಮತ್ತು ಇಡೀ ಸಸ್ಯ ಕತ್ತರಿಸಿದ ಸಯಪ್ರಸ್ ಸಸ್ಯವನ್ನು ಹೋಲುವುದರಿಂದ ಮಾಕ್‍ಸೈಪ್ರಸ್ ಎಂದೂ ಕರೆಯಲಾಗುತ್ತದೆ. ಇದನ್ನು ಕುಂಡಗಳಲ್ಲಿ ಮತ್ತು ಮಡಿಗಳಲ್ಲಿ ಬೆಳೆಸುತ್ತಾರೆ. ಕೋಕಿಯ ಜಾತಿಯಲ್ಲಿ ಸುಮಾರು 30ಕ್ಕೂ ಹೆಚ್ಚು ಪ್ರಭೇದಗಳಿವೆ. ಇವುಗಳಲ್ಲಿ ಸ್ಕೊಪೇರಿಯ ಪ್ರಭೇದವೇ ಬಲು ಮುಖ್ಯವಾದುದು. ಇದು ಸುಮಾರು 3'-5' ಎತ್ತರಕ್ಕೆ ಬೆಳೆಯುವ ಏಕವಾರ್ಷಿಕ ಮೂಲಿಕೆ ಸಸ್ಯ. ಕಾಂಡ ಸಿಂಪೋಡಿಯಲ್ ಮಾದರಿಯಲ್ಲಿ ಕವಲೊಡೆಯುವುದರಿಂದ ಇಡೀ ಸಸ್ಯ ಗೋಳಾಕಾರ ಅಥವಾ ಆಯುತಾಕಾರವನ್ನು ತಾಳುತ್ತದೆ. ಎಲೆಗಳ ಗಾತ್ರದಲ್ಲಿ ಬಹಳ ಚಿಕ್ಕವಾಗಿದೆ. ಹೂಗಳು ಎಲೆಗಳ ಕಂಕುಳಲ್ಲಿ ಒಂಟೊಂಟೊಯಾಗಿಯೊ ಗುಂಪಾಗಿಯೊ ಹುಟ್ಟುತ್ತವೆ. ಒಂದೊಂದು ಹೂವಿನಲ್ಲೂ 5 ಪೆರಿಯಾಂತ್ ಹಾಲೆಗಳೂ 5 ಕೇಸರಗಳೂ 2 ಕಾರ್ಪೆಲುಗಳಿಂದ ಕೂಡಿದ ಉಚ್ಚಸ್ಥಾನದ ಅಂಡಾಶಯವೂ ಇವೆ. ಫಲ ಯುಟ್ರಿಕಲ್ ಎಂಬ ಬಗೆಯದು. ಕೋಕಿವನ್ನು ಬೀಜಗಳಿಂದ ವೃದ್ಧಿಮಾಡಬಹದು. ಬೀಜಗಳನ್ನು ನೇರವಾಗಿ ಕುಂಡ ಅಥವಾ ಮಡಿಗಳಲ್ಲಿ ಬಿತ್ತುವುದೇ  ವಾಡಿಕೆ.  ಬಿತ್ತಿದ ಒಂದು ವಾರದಲ್ಲಿ ಬೀಜಗಳು ಮೊಳೆತು ಸಸಿಗಳಾಗುತ್ತವೆ. 3 ತಿಂಗಳಿಗೆ ಸಸ್ಯ ತನ್ನ ಗಾತ್ರದ ಪರಮಾವಧಿಯನ್ನು ಮುಟ್ಟುತ್ತದೆ. 		 (ಎನ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ